ಗ್ರೀನ್‍ಯಾರ್ಡ್, ವಿಕ್ಟರ್

	1871-1935. ಫ್ರೆಂಚ್ ರಸಾಯನವಿಜ್ಞಾನಿ. ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ 1912ರ ನೊಬೆಲ್ ಪ್ರಶಸ್ತಿಯ ಸಹವಿಜೇತ; ಇನ್ನೊಬ್ಬ ವಿಜೇತ ಫ್ರೆಂಚ್ ರಸಾಯನವಿಜ್ಞಾನಿ ಪಾಲ್ ಸಾಬಾಟ್ಯೇ (1854-1941). ಗ್ರೀನ್‍ಯಾರ್ಡ್ ಜನಿಸಿದ್ದು ವಾಯುವ್ಯ ಫ್ರಾನ್ಸಿನ ಷೇರ್‍ಬುರ್ಗ್ ಎಂಬಲ್ಲಿ. ಇವನ ವಿದ್ಯಾಭ್ಯಾಸ ಲೈಅನ್ಜ್ ಎಂಬಲ್ಲಿ ಲೂಯಿ ಬೋವಿಯೋ ಮತ್ತು ಫಿಲಿಪ್ಪೆ ಬಾರ್ಬಿಯರ್ ಎಂಬುವರ ಮಾರ್ಗದರ್ಶನದಲ್ಲಿ ನಡೆಯಿತು. ಇವನಿಗೆ ಆಗ್ರ್ಯಾನಿಕ್ ರಸಾಯನಶಾಸ್ತ್ರದಲ್ಲಿ ಇದ್ದಂಥ ಆಸಕ್ತಿ ಅಪಾರ. ಮೀಥೈಲ್ ಹೆಪ್ಟೈಲ್ ಕೀಟೋನ್, ಮೆಗ್ನೀಷಿಯಮ್ ಮತ್ತು ಮೀಥೈಲ್ ಅಯೊಡೈಡುಗಳಿದ್ದ ಮಿಶ್ರಣವೊಂದರಿಂದ ತೃತೀಯಕ (ಟರ್ಷಿಯರಿ) ಆಲ್ಕೊಹಾಲನ್ನು ತಯಾರಿಸುವ ಸಂಬಂಧದಲ್ಲಿ ಕೆಲವಾರು ಪ್ರಯೋಗಗಳನ್ನು ಪುನಃ ನಡೆಸುವಂತೆ ಬಾರ್ಬಿಯರ್ ಒಮ್ಮೆ ಗ್ರೀನ್‍ಯಾರ್ಡ್‍ನಿಗೆ ಆದೇಶಿಸಿದ. ಮೊದಲು ಅಯೊಡೈಡನ್ನು ಮೆಗ್ನೀಷಿಯಮಿನೊಂದಿಗೆ ವರ್ತಿಸಿ ಅನಂತರ ಜಿûಂಕ್ ಆಲ್ಕೈಲುಗಳ ತಯಾರಿಕೆಯ ಬಗ್ಗೆ ಇಂಗ್ಲಿಷ್ ಆಗ್ರ್ಯಾನಿಕ್ ರಸಾಯನಶಾಸ್ತ್ರಜ್ಞ ಎಡ್ವರ್ಡ್ ಫ್ರಾಂಕ್ಲೆಂಡ್ (1825-1899) ಎಂಬುವನ ವಿಧಾನಗಳನ್ನು ಅನುಸರಿಸಿ ತನಗೆ ವಿಧಿಸಿದ್ದ ಕಾರ್ಯವನ್ನು ಗ್ರೀನ್‍ಯಾರ್ಡ್ ನಿರ್ವಹಿಸಿದ. ಆಗ್ರ್ಯಾನೋ ಮೆಗ್ನೀಷಿಯಮ್ ಸಂಯುಕ್ತಗಳನ್ನು ಈತ ಕಂಡುಹಿಡಿದನಲ್ಲದೆ ಆಗ್ರ್ಯಾನಿಕ್ ರಸಾಯನಶಾಸ್ತ್ರದಲ್ಲಿ ಕಾಣಬರುವ ಗ್ರೀನ್‍ಯಾರ್ಡ್ ಕ್ರಿಯೆ (ನೋಡಿ- ಗ್ರೀನ್‍ಯಾರ್ಡ್-ಕ್ರಿಯೆ) ಎಂಬ ವಿಶೇಷ ಕ್ರಿಯೆ ಜನಕನೆನಿಸಿಕೊಂಡ. ಇವನು ಕಂಡು ಹಿಡಿದ ಅಭಿಕರ್ಮಕಗಳೆಲ್ಲವೂ ರಾಸಾಯನಿಕ ಪ್ರಯೋಗಗಳಲ್ಲಿ ಬಲು ಉಪಯುಕ್ತವೆನಿಸಿದುವು. ಆಮ್ಲಗಳು, ಆಲ್ಕೊಹಾಲುಗಳು ಮತ್ತು ಹೈಡ್ರೊಕಾರ್ಬನ್ನುಗಳನ್ನು ಕುರಿತ ಈತನ ಸಂಶ್ಲೇಷಣೆಗಾಗಿ ಇವನಿಗೆ ಡಾಕ್ಟೊರೇಟ್ ಪ್ರಶಸ್ತಿಯನ್ನು ನೀಡಲಾಯಿತು (1901). ಈತ ನ್ಯಾನ್ಸಿಯಲ್ಲಿ ಮೊದಲು (1910) ಆಗ್ರ್ಯಾನಿಕ್ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ. ಅನಂತರ ಲೈಆನ್ಜ್‍ನಲ್ಲೂ (1919) ಅದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದ. ಗ್ರೀನ್‍ಯಾರ್ಡ್ ಅಭಿಕರ್ಮಕಗಳನ್ನು ಬಳಸಿ ಇತರ ಆಗ್ರ್ಯಾನೋಲೋಹಸಂಯುಕ್ತಗಳನ್ನು ಮುಂದೆ ಇವನ ವಿದ್ಯಾರ್ಥಿಗಳು ತಯಾರಿಸಿದರು.			

(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ